ಪೋವೆಲ್, ಆಂತೋನಿ ಡೈಮೋಕ್ -
	1905 ಆಂಗ್ಲ ಕಾದಂಬರಿಕಾರ. ಹುಟ್ಟಿದ್ದು ಲಂಡನ್ನಿನಲ್ಲಿ. ತಂದೆ ವೆಲ್ಷ್ ರೆಜಿಮೆಂಟ್‍ನಲ್ಲಿ ಲೆಫ್ಟಿನೆಂಟ್ ಕರ್ನಲ್. ತನ್ನ ಕಾಯಾಭಾರದಿಂದಾಗಿ ವರ್ಗಾವಣೆಗೊಳ್ಳುತ್ತಿದ್ದ ತಂದೆಯೊಡನೆ ಬೇರೆ ಬೇರೆ ಕಡೆಗಳಲ್ಲಿ ತನ್ನ ಬಾಲ್ಯ ಕಳೆಯಿತು. ಈಟನ್ ಹಾಗೂ ಆಕ್ಸ್‍ಫರ್ಡಿನ ಬ್ಯಾಲಿಯಲ್ ಕಾಲೇಜುಗಳಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. ಇತಿಹಾಸ ಈತನ ಆಸಕ್ತಿಯ ವಿಷಯ. ಲಾಂಗ್‍ಫೋರ್ಡಿನ ಅರ್ಲ್‍ನ ಮಗಳು ಲೇಡಿ ವಯೊಲೆಟ್ ಪ್ಯಾಕೆನ್ ಹ್ಯಾಮಳನ್ನು ಈತ ಮದುವೆಯಾದ. ಎರಡನೆಯ ಮಹಾಯುದ್ಧದಲ್ಲಿ ಸುಮಾರು ಒಂದೂವರೆ ವರ್ಷ ಈತ ಸೈನ್ಯದಲ್ಲಿ ತನ್ನ ತಂದೆಯ ನೇತೃತ್ವದಲ್ಲಿದ್ದ ತುಕಡಿಯಲ್ಲಿ ಸೇವೆ ಸಲ್ಲಿಸಿದ. ಮುಂದೆ ಈತನನ್ನು ಗುಪ್ತಚರ್ಯೆ ವಿಭಾಗಕ್ಕೆ ವರ್ಗಾಯಿಸಲಾಯಿತು. 1956ರಲ್ಲಿ ಈತನಿಗೆ ಸಿ.ಬಿ.ಇ. ಗೌರವ ಪ್ರಶಸ್ತಿ ದೊರಕಿತು. ಮುಂದೆ ವಿದೇಶಗಳಲ್ಲಿಯೂ ಹಲವು ಗೌರವಯುತ ಹುದ್ದೆಗಳನ್ನು ಈತ ಅಲಂಕರಿಸಿದ. 

1931ರಲ್ಲಿ ಪ್ರಕಟವಾದ ಆಫ್ಟರ್‍ನೂನ್ ಮೆನ್ ಈತನ ಮೊದಲ ಕಾದಂಬರಿ. ಇದು ಈತನಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಅಲ್ಲಿಂದ ಈಚೆಗೆ ಈತ ಅನೇಕ ಕಾದಂಬರಿಗಳನ್ನು ರಚಿಸಿದ. ವೀನಸ್‍ಬರ್ಗ್ (1932); ಫ್ರಮ್ ಎ ವ್ಯೂ ಟು ಎ ಡೆತ್ (1933); ಏಜೆಂಟ್ಸ್ ಆಂಡ್ ಪೇಷಂಟ್ಸ್ (1936); ವಾಟ್ ಹ್ಯಾಸ್ ಬಿಕಮ್ ಆಫ್ ವಾರಿಂಗ್ (1939); ಎ ಡಾನ್ಸ್ ಟು ದಿ ಮ್ಯೂಸಿಕ್ ಆಫ್ ಟೈಮ್ ಎಂಬ ಶೀರ್ಷಿಕೆಯಲ್ಲಿ ಹೊರ ಬಂದ ಹನ್ನೆರಡು ಸರಣಿ ಕಾದಂಬರಿಗಳು-ಇವು ಈತನ ಪ್ರಸಿದ್ಧ ಕೃತಿಗಳು. ಈ ಕಾದಂಬರಿಗಳಲ್ಲಿ ಒಂದಾದ ಆಟ ಲೇಡಿ ಮೊಲ್ಲೀಸ್ (1957) ಎಂಬುದು ಟೈಟ್ ಬ್ಲಾಕ್ ಸ್ಮಾರಕ ಬಹುಮಾನ ಗಳಿಸಿದೆ. ಈ ಸರಣಿಯಲ್ಲಿನ ಎ ಕೊಶ್ಚನ್ ಆಫ್ ಬ್ರಿಂಗಿಂಗ್ (1951), ಎ ಬಯರ್ಸ್ ಮಾರ್ಕೆಟ್ (1952); ದಿ ಅಕ್ಸೆಪ್ಟೆನ್ಸ್ ವಲ್ರ್ಡ್ (1955); ಬುಕ್ಸ್ ಡೂ ಫರ್ನಿಶ್ ಎ ರೂಮ್, (1971) ಮೊದಲಾದವು ಜನಪ್ರಿಯ ಕಾದಂಬರಿಗಳೆನಿಸಿವೆ. 1948ರಲ್ಲಿ ಜಾನ್ ಔಬ್ರೆ ಆಂಡ್ ಹಿಸ್ ಫ್ರೆಂಡ್ಸ್ ಎಂಬ ಹೆಸರಿನಲ್ಲಿ ಈತ ಜೀವನಚರಿತ್ರೆಯೊಂದನ್ನು ರಚಿಸಿದ್ದಾನೆ.
(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ